ಹಲವಾರು ಯಶಸ್ವಿ ಅಂಶಗಳನ್ನು ಹೊತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರ ೧೦೦ನೇ ಚಿತ್ರ ’ಜೋಗಯ್ಯ’ ಈ ವಾರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಶಿವಣ್ಣ ಅವರ ೧೦೦ನೇ ಚಿತ್ರಕ್ಕೆ ೧೦೦ ದಿನಗಳ ಚಿತ್ರೀಕರಣ ಮಾಡಿರುವ ನಿರ್ದೇಶಕ ಪ್ರೇಮ್ ನೂರಾರು ದಿನಗಳ ತಾಂತ್ರಿಕತೆಯ ಸೊಬಗನ್ನು ಸುರಿದಿದ್ದಾರೆ.
ಭಾರತೀಯ ಚಿತ್ರರಂಗದಲ್ಲೇ ’ಜೋಗಯ್ಯ’..........ದಿ ಲೆಜೆಂಡ್ ಆಫ್ ಅಂಡರ್ವರ್ಲ್ಡ ಮೊಟ್ಟ ಮೊದಲ ಬಾರಿಗೆ ಒಂದು ಹಾಡು ಹಾಗೂ ಒಂದು ಸಾಹಸ ಸನ್ನಿವೇಶ ೩ ಡಿ. ತಂತ್ರಜ್ಞಾನದಲ್ಲಿ ಇರುವುದಕ್ಕಾಗಿ ಹೆಮ್ಮೆ ಪಡುವ ಚಿತ್ರ ಸುಮಾರು ೨೫೦ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು ಒಂದು ವಾರಕ್ಕೂ ಮುಂಚೆ ಕೆಲವು ಚಿತ್ರಮಂದಿರಗಳಲ್ಲಿ ಟಿಕೆಟ್ಗಳು ಸಹ ಮಾರಾಟವಾಗಿರುವುದು ಕನ್ನಡ ಚಿತ್ರರಂಗದ ಮತ್ತೊಂದು ಹೆಗ್ಗಳಿಕೆ.
ಪ್ರೇಮ್ ಪಿಕ್ಚರ್ಸ್ ಅವರ ರಕ್ಷಿತಾ ಪ್ರೇಮ್ ನಿರ್ಮಾಣದ ಪ್ರಥಮ ಚಿತ್ರ ಅತಿ ಹೆಚ್ಚು ಹಣ ಖರ್ಚಾಗಿರುವ ಚಿತ್ರವೂ ಹೌದು. ಚಿತ್ರದ ಬಿಡುಗಡೆಗೂ ಮುಂಚೆ ಲಕ್ಷಾಂತರ ಧ್ವನಿಸುರುಳಿ ಮಾರಾಟವಾಗಿರುವುದು ಪ್ರೇಮ್ ಚಿತ್ರದ ಗರಿಮೆ.
’ಜೋಗಯ್ಯ’ ಚಿತ್ರಕ್ಕೆ ಕತೆ, ಚಿತ್ರಕತೆ, ನಿರ್ದೇಶನ ಮಾಡಿರುವವರು ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್. ಇವರ ’ಜೋಗಿ’ ಚಿತ್ರ ೨೦೦೬ರಲ್ಲಿ ಆಗಸ್ಟ ೧೯ರಂದೇ ಬಿಡುಗಡೆಯಾಗಿತ್ತು, ಇದೀಗ ೫ ವರ್ಷಗಳ ನಂತರ ’ಜೋಗಯ್ಯ’ ಬರುತ್ತಿದ್ದಾನೆ.
ವಿ. ಹರಿಕೃಷ್ಣ ಅವರ ಸಂಗೀತ, ನಂದ ಕುಮಾರ್ ಅವರ ಛಾಯಾಗ್ರಹಣ ಇರುವ ಈ ಚಿತ್ರದ ನೃತ್ಯ ನಿರ್ದೇಶಕರು ನಾಗೇಶ್. ಸಾಹಸ ನಿರ್ದೇಶಕರು ಮಾಸ್ ಮಾದ. ಸಂಭಾಷಣೆ ನರೇಂದ್ರ ಬಾಬು ಹಾಗೂ ನಂದಕುಮಾರ್, ಕಲಾ ನಿರ್ದೇಶನ ಮೋಹನ್ ಬಿ. ಕೆರೆ, ಸಂಕಲನ ಶ್ರೀನಿವಾಸ್ ಪಿ. ಬಾಬು, ನಿರ್ಮಾಣ ನಿರ್ವಹಣೆ ದಶಾವರ ಚಂದ್ರು.
ತಾರಾಗಣದಲ್ಲಿ ಶಿವರಾಜ್ಕುಮಾರ್, ಸುಮೀತ್ ಕೌರ್ ಅತ್ವಾಳ್, ಪೂಜಾಗಾಂಧಿ, ಪತ್ರಕರ್ತ ಬಿ.ಗಣಪತಿ, ರವಿಶಂಕರ್, ರವೀಂದ್ರನಾಥ್, ಪಕ್ಕಣ್ಣ, ಜಾನ್, ಆನಂದ್, ಗೋಪಾಲ್, ಪ್ರವೀಣ್, ಜೋಶಿ, ಗುರುರಾಜ್ ಹೊಸಕೋಟೆ, ಉಮೇಶ್ ಪುಂಗ, ಸುರೇಶ್ ಮಂಗಳೂರ್, ದಶಾವರ ಚಂದ್ರು, ಹಾಗೂ ಇನ್ನಿತರರು ಇದ್ದಾರೆ.